Coorgcitizen

ಕುಶಾಲನಗರ ನೂತನ ತಾಲೂಕಾಗಿ ರಚನೆಯಾದ ಹಿನ್ನಲೆಯಲ್ಲಿ ಕಾರಣಕರ್ತರಾದ ಜನಪ್ರತಿನಿಧಿಗಳು, ಹೋರಾಟದಲ್ಲಿ ಪಾಲ್ಗೊಂಡು ಸಹಕಾರ ನೀಡಿದ ಸರ್ವರಿಗೂ ಧನ್ಯತಾ ಸಮರ್ಪಣಾ ಕಾರ್ಯಕ್ರಮದ ಮೂಲಕ ಧನ್ಯವಾದ ಸಲ್ಲಿಸಲು ಕುಶಾಲನಗರ ತಾಲೂಕು ಸಮಿತಿ ನಿರ್ಧರಿಸಿದೆ.
ಈ ಸಂಬಂಧ ಕಾವೇರಿ ತಾಲೂಕು ಹೋರಾಟ ಸಮಿತಿಯ ಕೇಂದ್ರ ಸಮಿತಿ ಪದಾಧಿಕಾರಿಗಳ ಸಭೆ ಕುಶಾಲನಗರದ ಕನ್ನಿಕಾ ಸಭಾಂಗಣದಲ್ಲಿ ನಡೆಯಿತು. ಈ ಹಿಂದೆ ಕುಶಾಲನಗರ ತಾಲೂಕು ಹೋರಾಟ ಸಮಿತಿ ಮೂಲಕ ಕೈಗೊಂಡ ಹೋರಾಟಗಳ ಬಗ್ಗೆ ಸಮಿತಿ ಸಂಚಾಲಕ ವಿ.ಪಿ.ಶಶಿಧರ್ ಮೆಲುಕು ಹಾಕಿದರು. ನೂತನ ತಾಲೂಕು ರಚನೆ ಹಿನ್ನಲೆಯಲ್ಲಿ ಮುಂದೆ ಆಗಬೇಕಿರುವ ಅಗತ್ಯ ಕಾರ್ಯಗಳ ಅನುಷ್ಠಾನಕ್ಕೆ ಒತ್ತಡ ಹಾಕುವ ಸಂಬಂಧ ಸಭೆಯ ಗಮನಕ್ಕೆ ತಂದರು. ತಾಲೂಕು ಘೋಷಣೆ ಮಾಡಿದ ಸಮ್ಮಿಶ್ರ ಸರಕಾರದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಳಗೊಂಡಂತೆ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಮತ್ತಿತರರಿಗೆ ಸನ್ಮಾನ ಮಾಡುವ ಮೂಲಕ ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಗೌರವ ಸಲ್ಲಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಶಶಿಧರ್ ತಿಳಿಸಿದರು. ಊರಿನ ಹಬ್ಬದಂತೆ ಈ ಕಾರ್ಯಕ್ರಮ ರೂಪಿಸಿ ತಾಲೂಕು ರಚನೆಗೆ ಶ್ರಮಿಸಿದ ಪ್ರತಿಯೊಬ್ಬರೂ ಒಂದೆ ಸೇರಿ ಸಂಭ್ರಮಾಚರಿಸಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸಮಿತಿ ಪ್ರಮುಖರಾದ ಜಿಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಸುನಿತಾ, ಆರ್.ಕೆ.ನಾಗೇಂದ್ರ, ಪ್ರಮುಖರಾದ ಭರತ್, ಎಂ.ವಿ.ನಾರಾಯಣ, ಎಂ.ಕೆ.ದಿನೇಶ್ ಕೇಂದ್ರ ಮತ್ತು ಸ್ಥಾನೀಯ ಸಮಿತಿಯ ಪ್ರಮುಖರು ಇದ್ದರು.

Open chat