Coorgcitizen

ಸೋಮವಾರಪೇಟೆ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ವಿಪತ್ತು ನಿರ್ವಹಣಾ ಸ್ವಯಂ ಸೇವಕರಿಗೆ ವಿಶೇಷ ತರಬೇತಿ ಶಿಬಿರ ನಡೆಯಿತು.
ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಾಲೂಕು ತಹಶೀಲ್ದಾರ್ ಗೋವಿಂದರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಕಾಲ ಕೊಡಗಿನ ಜನತೆ ಪ್ರಾಕೃತಿಕ ವಿಕೋಪದಿಂದ ತತ್ತರಿಸಿ ಹೋಗಿದ್ದರೆ. ಭೂಕುಸಿತ, ಪ್ರವಾಹ ಸಂದರ್ಭ ಎನ್‌ಡಿಆರ್‌ಎಫ್ ತಂಡದ ಶ್ರಮ ಮತ್ತು ಸೇವೆ ಅವಿಸ್ಮರಣೀಯ. ಇಂತಹ ತುರ್ತು ಸಂದರ್ಭಗಳಲ್ಲಿ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಲು ಸ್ವಯಂ ಸೇವಕರು ಅತ್ಯಗತ್ಯ. ಈ ನಿಟ್ಟಿನಲ್ಲಿ ಸ್ವಯಸೇವಕರನ್ನು ರೂಪಿಸಲು ತರಬೇತಿ ಕಾರ್ಯಗಾರ ರೂಪಿಸಿರುವುದು ಶ್ಲಾಘನೀಯ ವಿಚಾರ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ಪ್ರಕೃತಿ ವಿಕೋಪ ಸಂದರ್ಭ ಹಣ, ಆಸ್ತಿಗಿಂತ ಜೀವ ಉಳಿಸಿಕೊಳ್ಳುವುದು ಪ್ರಮುಖವಾಗುತ್ತದೆ. ೨೦೦೮-೦೯ ರಲ್ಲಿ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಂತ್ರಸ್ಥರಿಗೆ ೩ ಸಾವಿರ ಮನೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿಕೊಟ್ಟಿದ್ದರು. ಇಂತಹ ಪ್ರಕೃತಿ ವಿಕೋಪ ಎದುರಿಸಿ ಜನ, ಜಾನುವಾರುಗಳನ್ನು ರಕ್ಷಿಸಲು, ಜೀವನ ಮರು ರೂಪಿಸಿಕೊಳ್ಳಲು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪಡೆ ರಚಿಸಿ ಯೋಜನೆಗೆ ರೂ ೨ ಕೋಟಿ ಮೀಸಲಿರಿಸಿದ್ದಾರೆ. ಈಗಾಗಲೆ ರಾಜ್ಯದ ೫೫ ತಾಲೂಕುಗಳಲ್ಲಿ ಈ ವಿಪತ್ತು ನಿರ್ವಹಣಾ ಘಟಕ ಸ್ಥಾಪಿಸಿ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ಪಪಂ ಅಧ್ಯಕ್ಷ ಜೈವರ್ಧನ್ ಮಾತನಾಡಿ, ಮುಂದಿನ ದಿನಗಳಲ್ಲಿ ಶಾಲಾ ಕಾಲೇಜಿನ ಎನ್ನೆಸ್ಸೆಸ್, ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿ ನೀಡುವ ಮೂಲಕ ಅವರನ್ನು ಕೂಡ ಸೇವೆಗೆ ಸನ್ನದ್ದರಾಗಿಸಬೇಕಿದೆ ಎಂದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಉಪಾಧ್ಯಕ್ಷ ಎಂ.ಎನ್.ಚಂದ್ರಮೋಹನ್ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕ ಡಾ.ಎ.ಯೋಗೀಶ್, ತಾಲೂಕು ಯೋಜನಾಧಿಕಾರಿ ವೈ.ಪ್ರಕಾಶ್, ಎನ್‌ಡಿಆರ್ ಎಫ್ ತಂಡದ ಕಮಾಂಡರ್ ಪ್ರವೀಣ್ ಕುಮಾರ್ ಉಪಾಧ್ಯಾಯ್, ಕುಶಾಲನಗರ ಎಪಿಸಿಎಂಸ್ ಅಧ್ಯಕ್ಷ ಎಂ.ಎನ್.ಕುಮಾರಪ್ಪ, ಪಪಂ ಸದಸ್ಯ ಬಿ.ಅಮೃತ್ ರಾಜ್ ಇದ್ದರು. ಕಾರ್ಯಗಾರದಲ್ಲಿ ೧೦೦ ಮಂದಿ ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು. ಕಾವೇರಿ ನದಿಯಲ್ಲಿ ಪ್ರವಾಹ ಸಂದರ್ಭ ಕೈಗೊಳ್ಳಬಹುದಾದ ರಕ್ಷಣಾ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಯೋಜನೆಯ ಮೇಲ್ವಿಚಾರಕ ಹರೀಶ್, ಸೇವಾ ಪ್ರತಿನಿಧಿಗಳು ಎನ್‌ಡಿಆರ್‌ಎಫ್ ತಂಡದ ತರಬೇತುದಾರರು ಪಾಲ್ಗೊಂಡಿದ್ದರು.

Open chat