Coorgcitizen

ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಮೂಲಕ ಬಾಣವಾರ ಮೀಸಲು ಅರಣ್ಯ ಪ್ರದೇಶದಿಂದ ಬಂದ ನಾಲ್ಕು ಕಾಡಾನೆಗಳು ಕಣಿವೆ, ಹಕ್ಕೆ ಗ್ರಾಮ ವ್ಯಾಪ್ತಿಯಲ್ಲಿ ಆತಂಕ ಸೃಷ್ಠಿಸಿದ ಘಟನೆ ನಡೆಯಿತು.
ಬೆಳಗ್ಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು ಕಣಿವೆ ತೂಗುಸೇತುವೆ ಬಳಿ ಕಾವೇರಿ ನದಿ ದಂಡೆ ಮತ್ತು ಹಾರಂಗಿ ಬಲದಂಡೆ ನಾಲೆ ಸಮೀಪದಲ್ಲಿ ಬೀಡುಬಿಟ್ಟಿರುವ ಮಾಹಿತಿ ತಿಳಿದ ಪಿರಿಯಾಪಟ್ಟಣದ ತಾಲೂಕಿನ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾಡಾನೆಗಳನ್ನು ಅಲ್ಲಿಂದ ಪಟಾಕಿ ಸಿಡಿಸಿ ಕಣಿವೆ – ಹುಲುಸೆ ಗ್ರಾಮದ ಕಾವೇರಿ ನದಿಯನ್ನು ದಾಟಿಸಿದರು.
ಹಕ್ಕೆ ಮಂಟಿಯ ಹತ್ತಿರ ಚಿಕ್ಕ ಬೆಟ್ಟದ ಅಂಚಿನಲ್ಲಿ ಬೆಳಿಗ್ಗೆ ಪ್ರಕಾಶ ಎಂಬುವರ ಜಮೀನಿನಲ್ಲಿ ಬೆಳೆಯನ್ನು ತಿಂದು ಮನೆ ಅಂಗಳಕ್ಕೆ ಲಗ್ಗೆ ಹಾಕಿದೆ. ಮನೆಯ ಅಂಗಳಕ್ಕೆ ಬಂದ ಕಾಡಾನೆಗಳು ಮನೆಯ ಮುಂದೆ ಹಾಲು ಕರೆದು ಕಟ್ಟಿಹಾಕಿದ ಹಸುವನ್ನು ತನ್ನ ಕೊಂಬಿನಿಂದ ತಿವಿದು ಘಾಸಿಗೊಳಿಸಿದೆ.
ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ೬ ಗಂಟೆಗಳ ಪ್ರಯತ್ನದಿಂದಾಗಿ ಬಂದ ದಾರಿಯಲ್ಲಿ ಕಾಡಾನೆಗಳನ್ನು ಬಾಣವಾರ ಮೀಸಲು ಪ್ರದೇಶಕ್ಕೆ ಓಡಿಸುವುದರಲ್ಲಿ ಯಶಸ್ವಿಯಾದರು.

Open chat