Coorgcitizen

ಕುಶಾಲನಗರ ಪಟ್ಟಣ ಪಂಚಾಯ್ತಿ ಅಧಿಕಾರಿ ಮತ್ತು ಸಿಬ್ಬಂದಿಗಳ ವಿರುದ್ದ ಹಲವು ದೂರುಗಳು ಬಂದ ಹಿನ್ನಲೆಯಲ್ಲಿ ಪಂಚಾಯ್ತಿಗೆ ಕಛೇರಿಗೆ ಭೇಟಿ ನೀಡಿದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪಂಚಾಯ್ತಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ದೂರುಗಳು ಬಂದ ವಿಚಾರಗಳ ಸಂಬಂಧ ಹಲವು ದಾಖಲೆಗಳನ್ನು ಪರಿಶೀಲಿಸಿ ಮಾಹಿತಿಗಳನ್ನು ಪಡೆದುಕೊಂಡರು. ಈ ಸಂದರ್ಭ ಅಧಿಕಾರಿಗಳು ಕಳೆದ ಕೆಲವು ವರ್ಷಗಳಿಂದ ಸಮರ್ಪಕವಾಗಿ ದಾಖಲೆಗಳನ್ನು ನಿರ್ವಹಣೆ ಮಾಡದಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಕಂಡುಬಂತು. ಈ ಹಿನ್ನಲೆಯಲ್ಲಿ ಅವರು ಮುಖ್ಯಾಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪಂಚಾಯ್ತಿ ವ್ಯಾಪ್ತಿಯಲ್ಲಿ ಆಗಬೇಕಿರುವ ಪ್ರಮುಖ ಕಾರ್ಯಗಳು, ಸಮಸ್ಯೆಗಳ ಬಗ್ಗೆ ಸಭೆಯಲ್ಲಿದ್ದ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ದೂರುಗಳ ಬಂದ ಹಿನ್ನಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಆಸ್ತಿ ತೆರಿಗೆ, ಇ ಸ್ವತ್ತು ದಾಖಲಾತಿಗಳ ಸಮರ್ಪಕವಾಗಿ ನಿರ್ವಹಣೆಯಾಗದಿರುವ ಬಗ್ಗೆ ಕಂಡುಬಂದಿದೆ. ಅನಧಿಕೃತ ಬಡಾವಣೆಗಳು ನಿರ್ಮಾಣಗೊಂಡಿರುವ ಬಗ್ಗೆ ತಿಳಿದುಬಂದಿದ್ದು ಈ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಜನವರಿ ೩೦ ರ ಒಳಗಾಗಿ ಅಗತ್ಯ ದಾಖಲು ಪಟ್ಟಿಗಳನ್ನು ಸಿದ್ದಪಡಿಸಿ ಸಮರ್ಪಕವಾಗಿ ದಾಖಲಾತಿಗಳ ನಿರ್ವಹಣೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಈಗಾಗಲೆ ೩ ಕೋಟಿ ರೂಗಳ ಯೋಜನೆ ಸಿದ್ದಪಡಿಸಲಾಗಿದೆ. ಕುಂದಾಪುರದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಮಾದರಿ ಸ್ಥಾಪನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಪೌರಕಾರ್ಮಿಕರ ತಂಡ ಅಲ್ಲಿಗೆ ತೆರಳಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಅದರಂತೆ ಕುಶಾಲನಗರದಲ್ಲಿ ನಿರ್ಮಿಸಲು ಮುಂದಾಗಬೇಕಿದೆ. ಪರಿಶಿಷ್ಟ ಜಾತಿ/ಪಂಗಡಗಳ ಅನುದಾನ ಸಮರ್ಪಕ ಬಳಕೆಗೆ ಸೂಚನೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಕುಶಾಲನಗರ ಪಟ್ಟಣ ಪಂಚಾಯ್ತಿಯಲ್ಲಿ ತಾಂಡವವಾಡುತ್ತಿರುವ ಲಂಚಗುಳಿತನ, ಮದ್ಯವರ್ತಿಗಳ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಮರ್ಪಕ ದಾಖಲಾತಿ ಅಥವಾ ಮಾಹಿತಿ ನೀಡಿದಲ್ಲಿ ಅಂತಹ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Open chat