Coorgcitizen

ಅರಣ್ಯ ಮತ್ತು ಕಾಡುಪ್ರಾಣಿಗಳ ನಾಡಿಮಿಡಿತವನ್ನು ಅರಿತ ಎಸ್‌ಟಿ ಜನಾಂಗದವರು ಮಹಾತ್ ಬುದ್ದಿವಂತರು. ಆದರೆ ಹಲವು ಮಂದಿ ಮದ್ಯ ಮತ್ತಿತರ ಚಟಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ವಿಷಾದ ವ್ಯಕ್ತಪಡಿಸಿದರು.
ಕುಶಾಲನಗರ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾದ ಪದಾಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಟಿ ಜನಾಂಗದವರಿಗೆ ಸೂಕ್ತ ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆ ತರುವಂತಾಗಬೇಕು. ಈಗಾಗಲೆ ಗ್ರಾಪಂ ಚುನಾವಣೆಯಲ್ಲಿ ಜಿಲ್ಲೆಯ ಪಂಚಾಯ್ತಿಗಳಲ್ಲಿ ಶೇ.೭೦ ರಷ್ಟು ಎಸ್‌ಟಿ ಸಮುದಾಯದವರು ಆಯ್ಕೆಗೊಂಡಿದ್ದಾರೆ. ಇವರನ್ನು ಸನ್ಮಾನಿಸಿ ಸಮಾಜದ ನಾಯಕನಂತೆ ಪ್ರತಿಬಿಂಬಿಸುವ ಕೆಲಸ ಮುಖಂಡರುಗಳು ಮಾಡಬೇಕಿದೆ. ಇಡೀ ದೇಶದಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್ ಮುಕ್ತವಾಗಿರೊ ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಎಸ್‌ಟಿ ಸಮುದಾಯದವರು ಪಕ್ಷ ಸೇರ್ಪಡೆ ನಿಚ್ಚಳ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಬಿಜೆಪಿಯ ಪ್ರತಿಯೊಂದು ಘಟಕಗಳು ತಳಮಟ್ಟದಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಎಲ್ಲೆಡೆ ಬಿಜೆಪಿ ಅಕಾರದ ಚುಕ್ಕಾಣಿ ಹಿಡಿಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ತಿಪ್ಪರಾಜು ಹವಾಲ್ದಾರ್ ಮಾತನಾಡಿದರು.
ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಮಿಟ್ಟು ರಂಜಿತ್ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.
ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ ನಾಯಕ್, ಮಂಜುನಾಥ್ ಓಲೇಕಾರ್, ಜಿಪಂ ಸದಸ್ಯೆ ಕೆ.ಆರ್.ಮಂಜುಳಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಬಿಜೆಪಿ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪ್ರಮುಖರಾದ ಬಿ.ಕೆ.ಮೋಹನ್ ಮತ್ತಿತರರು ಇದ್ದರು.

Open chat