Coorgcitizen

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ 26ನೇ ವರ್ಷದ ಪಂಪಾ ಬೆಳಕು ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು.
ದಿ.ನಾಗರಾಜ್ ಗುರುಸ್ವಾಮಿ ತಂಡದ ಆಶ್ರಯದಲ್ಲಿ ನಡೆದ ಪೂಜಾ ಕಾರ್ಯಕ್ರಮದ ಅಂಗವಾಗಿ ದೇವಾಲಯವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದ ಆವರಣದಲ್ಲಿ ಕಲಾತ್ಮಕ ರಂಗೋಲಿಯ ಚಿತ್ತಾರ, ಭಕ್ತಾದಿಗಳು ಬೆಳಗಿಸಿದ ಮಣ್ಣಿನ ಹಣತೆಗಳು ಪೂಜೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಿತು.

ಸಂಜೆ ದೇವಾಲಯದಲ್ಲಿ ಪಡಿಪೂಜೆ, ಸಾಂಪ್ರದಾಯಿಕ ವಿಧಿಗಳ ನಂತರ ಸಮೀಪದ ಕಾವೇರಿ ನದಿಯಲ್ಲಿ ಅಯ್ಯಪ್ಪಸ್ವಾಮಿ ಮೂರ್ತಿಗೆ ತೀರ್ಥಸ್ನಾನ ನೆರವೇರಿಸಿದ ಬಳಿಕ ಪಂಪಾದೀಪವನ್ನು ನದಿಯಲ್ಲಿ ತೇಲಿಬಿಡಲಾಯಿತು.
ಈ ಸಂದರ್ಭ ಮಾತನಾಡಿದ ತಂಡದ ಪ್ರಮುಖರಾದ ವಿ.ಎಸ್.ಆನಂದಕುಮಾರ್, ಕೊರೋನ ಹಿನ್ನಲೆಯಲ್ಲಿ ಸಾಂಪ್ರದಾಯಿಕ ವಿಧಿಗಳನ್ನು ಸರಳವಾಗಿ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ದೇವಾಲಯದ ಅರ್ಚಕರಾದ ಕೃಷ್ಣಮೂರ್ತಿ ಭಟ್, ವಿಷ್ಣು ಭಟ್, ಸೋಮಶೇಖರ್ ಭಟ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಗಳು ಜರುಗಿದವು. ಅಯ್ಯಪ್ಪಸ್ವಾಮಿ ಮಾಲಾಧಾರಿಗಳು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಂಡದ ಸದಸ್ಯರಾದ ಚಂದ್ರು, ರಾಜೇಶ್, ರಾಕಿ, ನರೇಂದ್ರ, ದಿಲೀಪ್ ಸೇರಿದಂತೆ ಬಳಗದ ಸದಸ್ಯರು, ಇದ್ದರು.

Open chat